ಕಂಬಳ : ಕೋಣಗಳ ಓಟದ ಸ್ಪರ್ಧೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಲೂ ಜೀವಂತವಾಗಿರುವ ಜನಪದ ವಿನೋದಗಳಲ್ಲಿ ಪ್ರಮುಖವಾದುದು. ಹೊಲಗಳನ್ನು ಉತ್ತು, ಹರಗಿ ಆದ ಬಳಿಕ ವಿನೋದಕ್ಕಾಗಿ ಕೋಣಗಳನ್ನು ಗದ್ದೆಯಲ್ಲಿ ಓಡಿಸುತ್ತಿದ್ದ ಸಾಮಾನ್ಯ ವಿಷಯವೇ ಗ್ರಾಮೀಣ ಅಭಿರುಚಿಯ ಒಂದು ವಿನೋದವಾಗಿ ಪರಿಣಮಿಸಿ ದೊಡ್ಡ ಉತ್ಸವದ ರೂಪ ತಾಳಿತು. ಗ್ರಾಮದ ಹಿರಿಯ ಗುತ್ತು ಮನೆಯವರೂ ಇತರ ಮುಖ್ಯಸ್ಥರೂ ನಾಡಿನ ಬಲ್ಲಾಳರೂ ಕಂಬಳಗಳನ್ನು ಏರ್ಪಡಿಸತೊಡಗಿದರು. ಅರಸರು ಜರುಗಿಸುತ್ತಿದ್ದ ದೊಡ್ಡ ಕಂಬಳಕ್ಕೆ ಅರಸುಕಂಬಳ ಎಂಬ ಹೆಸರಿತ್ತು. ಮೂಲ್ಕಿ ಸಾವಂತ ಅರಸರ ಕಾಲದಲ್ಲಿ ಇಂಥ ಕಂಬಳದ ಪರಂಪರೆ ತುಂಬ ಪ್ರಸಿದ್ಧಿ ಪಡೆದಿತ್ತು. ವಂಡಾರು ಎಂಬಲ್ಲಿಯ ಕಂಬಳ ಬಹು ಹೆಸರುವಾಸಿಯಾದುದು.

ಪ್ರತ್ಯೇಕವಾಗಿ ಒಳ್ಳೆಯ ತಳಿಯ ಕೋಣಗಳನ್ನು ವಿಶೇಷ ಪೌಷ್ಟಿಕ ಆಹಾರ ಕೊಟ್ಟು ಕಂಬಳದ ಓಟಕ್ಕಾಗಿ ಸಾಕುವ ಹವ್ಯಾಸ ಇತ್ತೀಚೆನವರೆಗೂ ಇತ್ತು. ಇಂಥ ಕೋಣಗಳ ಎಷ್ಟು ಜೊತೆಗಳು ಹಟ್ಟಿಯಲ್ಲಿರುತ್ತಿದ್ದುವೋ ಅಷ್ಟಷ್ಟು ವ್ಯಕ್ತಿಯ ಪ್ರತಿಷ್ಠೆ ಹೆಚ್ಚಾಗುತ್ತಿತ್ತು. ಓಟಕ್ಕಾಗಿ ಮಾತ್ರ ಮೀಸಲಾಗಿದ್ದ ಇಂಥ ಕೊಬ್ಬಿದ ಕೋಣಗಳಿಂದ ಗದ್ದೆ ಉಳುವಂಥ ಇತರ ಕೆಲಸಗಳನ್ನು ಸಾಮಾನ್ಯವಾಗಿ ಮಾಡಿಸುತ್ತಿರಲಿಲ್ಲ. ನಾಗರಿಕ ಆಕರ್ಷಣೆಗಳು ಹೆಚ್ಚಾದಂತೆಲ್ಲ ಓಟದ ಕೋಣಗಳನ್ನು ಸಾಕುವ ಹವ್ಯಾಸ ಬಹಳ ಕಡಿಮೆಯಾಗುತ್ತಿದೆ. ಯಕ್ಷಗಾನ ಮೇಳಗಳಂತೆ ಕಂಬಳದ ನಿರ್ವಹಣೆ ತುಂಬ ದುಬಾರಿಯಾಗುತ್ತಿರುವುದೂ ಅದರ ಇಳಿಮುಖಕ್ಕೆ ಇರುವ ಮತ್ತೊಂದು ಕಾರಣ.

ವಿಶಾಲವಾದ ಹೊಲದ ಒಂದು ಮಗ್ಗುಲಿನ ಉದ್ದಕ್ಕೆ ಸು. 15 ಅಡಿಗಳಷ್ಟು ಅಗಲಕ್ಕೆ ಕರೆಕಡಿದು ಓಟದ ಜಾಗವನ್ನು ಪ್ರತ್ಯೇಕಿಸಿ ಪ್ರಶಸ್ತಗೊಳಿಸುತ್ತಾರೆ. ಇದರ ಇಮ್ಮಡಿಯಷ್ಟು ಜಾಗವನ್ನು ಕಡಿದಿದ್ದರೆ ಅದಕ್ಕೆ ಜೋಡುಕರೆ ಎನ್ನುತ್ತಾರೆ. ಹೀಗಿದ್ದಲ್ಲಿ ಓಡಿದ ಕೋಣಗಳು ಹಿಂದೆ ತಿರುಗಿ ಬರುವುದಕ್ಕೂ ಸಾಧ್ಯವಾಗುತ್ತದೆ. ಓಟದ ಜಾಗಕ್ಕೆ ಒಂದು ಹದದಲ್ಲಿ ನೀರು ಬಿಟ್ಟಿರುತ್ತಾರೆ. ನೀರು ಹೆಚ್ಚು ಅಥವಾ ಕಡಿಮೆಯಾದರೆ ಓಟಕ್ಕೆ ಆತಂಕವಾಗುತ್ತದೆ. ಕೆಲವು ಕಡೆ ಹೊಳೆಯ ನೀರನ್ನು ಕಾಲುವೆಯಂತೆ ಉಪಯೋಗಿಸುತ್ತಾರೆ. ಅಲ್ಲಿ ಕಂಬಳದ ಕರೆ ಕಡಿಸುವುದೂ ಉಂಟು.
ಕಂಬಳಕ್ಕೆ ಕ್ರಮದಂತೆ ಆಮಂತ್ರಣ ಹೋದಮೇಲೆ ಓಟದ ಕೋಣಗಳನ್ನು ಸಿಂಗರಿಸಿ, ವಾದ್ಯಘೋಷ, ಕುಣಿತ, ಹಾಡು, ಸಿಡಿಮದ್ದುಗಳ ಸಂಭ್ರಮಗಳಿಂದ ಕಂಬಳದ ಗದ್ದೆಯ ಬಳಿಗೆ ತರುತ್ತಾರೆ. ಈಚೆಗೆ ಅವನ್ನು ಲಾರಿಯಲ್ಲಿ ಸಾಗಿಸುವುದೂ ಉಂಟು. ಅನಂತರ ಒಂದೊಂದೇ ಜೊತೆ ಕೋಣಗಳನ್ನು ವಿಧಿವತ್ತಾಗಿ ಕಂಬಳದ ಕಳಕ್ಕೆ ಇಳಿಸುತ್ತಾರೆ. ಕೋಣಗಳಿಗೆ ಕಟ್ಟಿದ ಹರಗುವ ಹಲಗೆಯ (ಗೋರುಹಲಗೆ) ಮೇಲೆ ಕೋಣಗಳನ್ನು ಓಡಿಸುವ ವ್ಯಕ್ತಿ ನಿಂತು, ಕೋಣಗಳ ಬಾಲಗಳನ್ನು ಎಡಗೈಯಿಂದ ಬಿಗಿಹಿಡಿದು ಬಲಗೈಯ ಚಾವಟಿಯಿಂದ ಬಲವಾಗಿ ಅವುಗಳಿಗೆ ಬಾರಿಸುತ್ತ ಅವು ವೇಗವಾಗಿ ಓಡುವಂತೆ ಚೋದಿಸುತ್ತಾನೆ. ಸೊಕ್ಕಿದ ಕೋಣಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವೂ ಅಪಾಯಕಾರಿಯೂ ಆದ ಕೆಲಸವಾದ್ದರಿಂದ ಅದನ್ನು ನಿರ್ವಹಿಸುವವ ಬಲಶಾಲಿಯೂ ನುರಿತವನೂ ಆಗಿರಬೇಕು. ವ್ಯಕ್ತಿ ನಿಂತ ಅಡ್ಡ ಹಲಗೆ ನೀರನ್ನು ಮೇಲಕ್ಕೆ ಹಾಯಿಸುತ್ತ ಮುಂದಕ್ಕೆ ಧಾವಿಸುತ್ತದೆ. ಸಾಮಾನ್ಯವಾದ ಗೋರು ಹಲಗೆಯನ್ನೇ ಓಟಕ್ಕೂ ಅಡ್ಡ ಹಲಗೆಯಾಗಿ ಹಿಂದೆ ಉಪಯೋಗಿಸುತ್ತಿದ್ದರು. ಆದರೆ ಅದರ ಮೂಲಕ ಸಾಕಷ್ಟು ಹೆಚ್ಚು ಎತ್ತರಕ್ಕೆ ನೀರು ಚಿಮ್ಮುವುದಿಲ್ಲವೆಂಬುದರಿಂದ, ಅದರ ರಚನೆಯಲ್ಲಿ ತುಸು ವ್ಯತ್ಯಾಸ ಮಾಡಿ ಕಣೆಹಲಗೆ ಎಂಬುದನ್ನು ಈಗ ಬಳಸತೊಡಗಿದ್ದಾರೆ. ಕಂಬಳದ ತಳದ ಕೊನೆಯ ತುದಿಗೆ ಅಂದರೆ ಕೋಣಗಳು ಓಡಿ ಗುರಿಮುಟ್ಟುವಲ್ಲಿಗೆ ಮಂಜೊಟ್ಟಿ ಎನ್ನುತ್ತಾರೆ. ಕಂಬಳದ ಕೋಣಗಳನ್ನು ಮಂಜೊಟ್ಟಿಕೋಣ ಎಂದೂ ಕರೆಯುವುದುಂಟು. ಹಿಂದೆ ನಡೆದುದೆನ್ನಲಾದ ಕಂಬಳದ ಒಂದು ದುರಂತ ಪ್ರಕರಣ ಮಂಜೊಟ್ಟಿಗೋಣ ಎಂಬ ತುಳುಪಾಡ್ಡನವಾಗಿ ಈಗಲೂ ಪ್ರಚಲಿತವಾಗಿದೆ. ಕಂಬಳದ ಕರೆಯ ಸು. ಮಧ್ಯದಲ್ಲಿ, ಅಥವಾ ಮಂಜೊಟ್ಟಿಗೆ ಸಮೀಪವಾಗಿ ಒಂದೋ ಎರಡೋ ನಿಶಾನೆಗಳನ್ನು ನೆಟ್ಟಿರುತ್ತಾರೆ. ಸು. 20 ಅಡಿಗಳಷ್ಟು ಎತ್ತರಕ್ಕೆ ಅಡ್ಡವಾಗಿ ಕಟ್ಟಿರುವ ನಿಶಾನೆಗೆ ಬಟ್ಟೆಯನ್ನು ಅಥವಾ ಹಲಗೆಯನ್ನು ಉಪಯೋಗಿಸುತ್ತಾರೆ. ನಿಶಾನೆಗೆ ನೀರು ಮುಟ್ಟಿಸಿದ ಕೋಣಗಳು ಓಟದಲ್ಲಿ ಉತ್ತಮ ಎಂಬ ಪ್ರಶಸ್ತಿಗೆ ಪಾತ್ರವಾಗುತ್ತವೆ. ನಿಶಾನೆ ಎಷ್ಟು ಎತ್ತರಕ್ಕೆ ಒದ್ದೆಯಾಯಿತು ಎಂಬುದರ ಮೇಲಿಂದ ಒಂದನೆಯ ಎರಡನೆಯ ಇತ್ಯಾದಿ ಬಹುಮಾನಗಳು ಅನುಕ್ರಮವಾಗಿ ಸಲ್ಲುತ್ತವೆ. ಚಿನ್ನದ, ಬೆಳ್ಳಿಯ ಪದಕಗಳು, ಬಾಳೆಯ ಗೊನೆ ಇತ್ಯಾದಿ ಬಹುಮಾನಗಳನ್ನು ಇರಿಸುವ ವಾಡಿಕೆಯುಂಟು. ಒಟ್ಟೊಟ್ಟಿಗೆ ಎರಡೆರಡು ಜೊತೆ ಕೋಣಗಳನ್ನು ಓಡಿಸಿ, ಓಟದಲ್ಲಿ ಯಾವುದು ಮೊದಲು ಬರುತ್ತದೆ ಎಂದು ಸ್ಪರ್ಧೆಯನ್ನು ಏರ್ಪಡಿಸುವುದುಂಟು. ಕಂಬಳದ ಅಂಗವಾಗಿ ಕೋಳಿಕಾಳಗ (ನೋಡಿ-ಕೋಳಿ-ಅಂಕ) ಇತ್ಯಾದಿ ಇತರ ಮನರಂಜನೆಗಳನ್ನು ಏರ್ಪಡಿಸುವುದೂ ಉಂಟು.	(ಎ.ಎಸ್ಓ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ